ಕೋಲ್‍ರಿಜ್, ಹಾಟ್ರ್ಲಿ	
1796-1849. ಕವಿ. ಪ್ರಸಿದ್ಧ ಆಂಗ್ಲಲೇಖಕ ಸ್ಯಾಮ್ಯುಯಲ್ ಟೇಲರ್ ಕೋಲ್‍ರಿಜ್‍ನ ಹಿರಿಯ ಮಗ. ಹುಟ್ಟಿದ್ದು ಕ್ಲೀವ್‍ಡನ್‍ನಲ್ಲಿ. ಚಿಕ್ಕವನಾಗಿದ್ದಾಗಲೇ ಪ್ರತಿಭಾವಂತನೆನಿಸಿಕೊಂಡಿದ್ದ. ವಿದ್ಯಾಭ್ಯಾಸ ಆಕ್ಸಫರ್ಡಿನಲ್ಲಿ. ಓರಿಯಲ್ ಫೆಲೋ ಪದವಿಗೆ ಆಯ್ಕೆಯಾಗಿದ್ದ ಈತ ತನ್ನ ದುಡಿಕಿನಿಂದ ಅದನ್ನು ಕಳೆದುಕೊಂಡ. ಇದರಿಂದ ನೊಂದು ಲಂಡನ್ನಿಗೆ ತೆರಳಿ ಅಲ್ಲಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯತೊಡಗಿದ. 1823ರಿಂದ 1828ರ ವರೆಗೆ ಆಂಬ್ಲೆ ಸೈಡ್‍ನಲ್ಲಿ ಒಂದು ಶಾಲೆಯನ್ನು ತೆರೆಯಲು ಯೋಚಿಸಿ ಅದು ಕೈಗೂಡದೆ ನಿರಾಶನಾಗಿ ತನ್ನ ಜೀವನ ಪರ್ಯಂತ ಗ್ರಾಸ್‍ಮಿಯರ್‍ನಲ್ಲಿ ಏಕಾಂತಿಯಾಗಿದ್ದ. ಅಲ್ಲಿಯೇ ಯಾರ್ಕ್‍ಷೈರ್ ಮತ್ತು ಲ್ಯಾಂಕಷೈರಿನ ಗಣ್ಯವ್ಯಕ್ತಿಗಳನ್ನು ಕುರಿತಂಥ ಬಯೋಗ್ರಾಫಿಯ ಬೊರಿಯಾಲಿಸ್ (1832), ಮತ್ತು ಲೈಫ್ ಆಫ್ ಮ್ಯಾಸಿಂಜರ್ (1839) ಎಂಬ ಗ್ರಂಥಗಳನ್ನು ರಚಿಸಿದ. ಈತ ಆಂಗ್ಲ ಸಾಹಿತ್ಯದಲ್ಲಿ ತನ್ನ ಕೆಲವು ಸುನೀತಗಳಿಗಾಗಿ ಪ್ರಖ್ಯಾತನಾಗಿದ್ದಾನೆ. ಈತನ ಕವನಗಳಲ್ಲಿ ಒಂದು ಬಗೆಯ ಖೇದ, ಮಾಧುರ್ಯಗಳಿವೆ. ಈತನ ಮರಣಾನಂತರ ಈತನ ಕೆಲವು ಪದ್ಯಗಳನ್ನು, ಅಪೂರ್ಣಗೊಂಡ ಪ್ರೊಮಿಥಿಯಸ್ ಎಂಬ ನಾಟಕವನ್ನು ಈತನ ಸಹೋದರ ಡರ್‍ವೆಂಟ್ ಪ್ರಕಟಿಸಿದ.			(ಎಸ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ